ರಾಯಬಾಗ
ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ, ಬೆಳಗಾಂವಿಯ ಉತ್ತರಕ್ಕೆ ಇರುವ ಈ ತಾಲ್ಲೂಕನ್ನು ದಕ್ಷಿಣದಲ್ಲಿ ಗೋಕಾಕ, ಪಶ್ಚಿಮದಲ್ಲಿ ಚಿಕ್ಕೋಡಿ, ಉತ್ತರದಲ್ಲಿ ಅಥಣಿ ತಾಲ್ಲೂಕುಗಳೂ ಪೂರ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಮುಧೋಳ ತಾಲ್ಲೂಕುಗಳೂ ಸುತ್ತುವರಿದಿವೆ. ಎರಡು ಪಟ್ಟಣಗಳೂ 52 ಗ್ರಾಮಗಳೂ ಇರುವ ಈ ತಾಲ್ಲೂಕಿನ ವಿಸ್ತೀರ್ಣ 959.2 ಚಕಿಮೀ. ಜನಸಂಖ್ಯೆ 3,47,537 (2001).

ಪೂರ್ವಕ್ಕೆ ಇಳಿಜಾರಾದ ಈ ತಾಲ್ಲೂಕಿನಲ್ಲಿ ಮರಳು ಮಿಶ್ರಿತ ಭೂಭಾಗ ಹೆಚ್ಚು. ಈ ತಾಲ್ಲೂಕಿನಲ್ಲಿ ಜೋಳ, ಸಜ್ಜೆ, ದ್ವಿದಳ ಧಾನ್ಯಗಳನ್ನೂ ಮೆಣಸಿನಕಾಯಿ ಮತ್ತು ಹಣ್ಣುಗಳನ್ನೂ ಬೆಳೆಯುತ್ತಾರೆ.
ಕೃಷ್ಣಾ ಈ ತಾಲ್ಲೂಕಿನ ಮುಖ್ಯನದಿ. ತಾಲ್ಲೂಕಿನ ಉತ್ತರದಲ್ಲಿ ಪೂರ್ವಾಭಿಮುಖವಾಗಿ ಹರಿಯುವುದಲ್ಲದೇ ಚಿಕ್ಕೋಡಿ ಮತ್ತು ಅಥಣಿ ತಾಲ್ಲೂಕುಗಳನ್ನು ರಾಯಬಾಗದಿಂದ ಬೇರ್ಪಡಿಸುವ ಗಡಿಯಾಗಿದೆ. ಈ ನದಿಯ ಉದ್ದಕ್ಕೂ ಇರುವ ಫಲವತ್ತಾದ ಬಲದಂಡೆ ರಾಯಬಾಗ ತಾಲ್ಲೂಕಿಗೆ ಸೇರಿದೆ. ಕೃಷ್ಣಾ ನದಿಯನ್ನು ಕೂಡುವ ಕೆಲವು ಸಣ್ಣ ತೊರೆಗಳು ಇವೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 95.34 ಮಿಮೀ.

ಈ ತಾಲ್ಲೂಕಿನಲ್ಲಿ ಸೇಂಗಾ ಎಣ್ಣೆ ಉತ್ಪಾದನೆ ಪ್ರಮುಖವಾಗಿದ್ದು ಇತ್ತೀಚೆಗೆ ಸಿಮೆಂಟ್ ಕೊಳವೆಗಳನ್ನೂ ತಯಾರಿಸುವ ಉದ್ಯಮವಿದೆ. ತಾಲ್ಲೂಕಿನಲ್ಲಿ ವಾಣಿಜ್ಯ ಮತ್ತು ಕೃಷಿಯೇತರ ಬ್ಯಾಂಕುಗಳಿವೆ. ಶಾಲಾ ಕಾಲೇಜುಗಳೂ ಆರೋಗ್ಯ ಕೇಂದ್ರ ಮತ್ತು ಔಷಧಾಲಯಗಳೂ ಇವೆ. ಹುಬ್ಬಳ್ಳಿ-ಪುಣೆ ರೈಲುಮಾರ್ಗ ಈ ತಾಲ್ಲೂಕಿನಲ್ಲಿ ಹಾದುಹೋಗಿದೆ. ರಾಯಬಾಗಕ್ಕೆ ಪೂರ್ವದಲ್ಲಿ 5 ಕಿಮೀ ದೂರದಲ್ಲಿ ರಾಯಬಾಗ ರೋಡ್ ರೈಲ್ವೆನಿಲ್ದಾಣವಿದೆ.

ಈ ತಾಲ್ಲೂಕಿನಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಕುಡಚಿ ಕೃಷ್ಣಾನದಿಯ ಬಲದಂಡೆಯ ಮೇಲೆ ಇದೆ. ಇದು ಹುಬ್ಬಳ್ಳಿ - ಪುಣೆ ರೈಲುಮಾರ್ಗದ ಒಂದು ನಿಲ್ದಾಣ. ಈ ಊರಿನಬಳಿ ಕೃಷ್ಣಾನದಿಗೆ ದೊಡ್ಡ ಸೇತುವೆ ಕಟ್ಟಿದೆ. ಇದು ಮಹಾರಾಷ್ಟ್ರದ ಮೀರಜ್ ಮೊದಲಾದೆಡೆಗಳಿಗೆ ಸಂಪರ್ಕ ಕಲ್ಪಿಸಿದೆ. ಫೆರಿಷ್ಟನ ಪ್ರಕಾರ ಬಹುಮನಿ ರಾಜ್ಯ ಸ್ಥಾಪನಕನಾದ ಹಸನ್‍ಗಂಗುವಿಗೆ ಈ ಊರು ತೊಘಲಕರಿಂದ ಬಂದ ಪ್ರಥಮ ಜಹಗೀರು. ಈ ಊರಿನ ಬಳಿ ಶಿಲಾ-ತಾಮ್ರ ಯುಗದ ನೆಲೆಯೊಂದನ್ನು ಈಚೆಗೆ ಗುರುತಿಸಲಾಗಿದೆ. ರಾಯಬಾಗದ ಈಶಾನ್ಯಕ್ಕೆ 8ಕಿಮೀ ದೂರದಲ್ಲಿರುವ ಚಿಂಚಲಿ ಗ್ರಾಮದ ಮಾಯಮ್ಮನ ಮಂದಿರ ಪ್ರಸಿದ್ಧವಾದದ್ದು. ತಾಲ್ಲೂಕಿನ ಪೂರ್ವದಂಚಿನಲ್ಲಿ ರಾಯಬಾಗಕ್ಕೆ ಆಗ್ನೇಯದಲ್ಲಿ 21 ಕಿಮೀ ದೂರದಲ್ಲಿರುವ ಮುಗಳಖೋಡದಲ್ಲಿ ಯಲ್ಲಿಂಗ (ಎಲ್ಲಪ್ಪ) ಮಹಾರಾಜ ಸ್ಥಾಪಿಸಿದ ಪ್ರಸಿದ್ಧ ಮಠವಿದೆ. ರಾಯಬಾಗಕ್ಕೆ ಸು. 5 ಕಿಮೀ ದೂರದಲ್ಲಿರುವ ರಾಮಗಟ್ಟಿ ಪವಾಡಸಿದ್ಧರ ಕ್ಷೇತ್ರ. ಇಲ್ಲಿನ ಹೊಂಡಗಳ ನೀರು ಚರ್ಮರೋಗಗಳನ್ನು ಗುಣಪಡಿಸುವುದೆಂದು ಪ್ರತೀತಿ.
ರಾಯಬಾಗ ಈ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ಬೆಳಗಾಂವಿಯ ಉತ್ತರಕ್ಕೆ 96 ಕಿಮೀ ದೂರದಲ್ಲೂ ಚಿಕ್ಕೋಡಿಯ ಈಶಾನ್ಯಕ್ಕೆ 29 ಕಿಮೀ ದೂರದಲ್ಲೂ ಇರುವ ಈ ಪಟ್ಟಣ ಸುತ್ತಲ ಗ್ರಾಮಗಳಿಗೆ ಮುಖ್ಯ ವ್ಯಾಪಾರಕೇಂದ್ರ. ಜನಸಂಖ್ಯೆ 15,924 (2001).	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
									